ಮೊದಲಕಲ್ಲು ಶೇಷದಾಸ 
ಸು. 1800 - 85. ಕರ್ನಾಟಕದ ಹರಿದಾಸರಲ್ಲೊಬ್ಬರು. ಆ ಗ್ರಾಮದ ಸುಮಾರು 8 ಕಿಮೀ ದೂರದಲ್ಲಿರುವ ಹರಿದಾಸ ಇವರ ಜನ್ಮಸ್ಥಳ. ಆ ಗ್ರಾಮದ ಕುಲಕರಣಿಯ ವೃತ್ತಿಯಲ್ಲಿ ನಿರತರಾಗಿದ್ದ ಇವರನ್ನು ಶೇಷಪ್ಪ ಎಂದು ಕರೆಯುತ್ತಿದ್ದರು. ತುಂಗಭದ್ರಾ - ಕೃಷ್ಣಾ ನದಿಗಳ ಮಧ್ಯದಲ್ಲಿರುವ ಮೊದಲಕಲ್ಲಿಗೆ ಹೋಗಿ ತಪಸ್ಸು ಮಾಡಿ ಕೀರ್ತನೆಗಳನ್ನು ರಚಿಸಿ ಹಾಡಿದ್ದರಿಂದ ಮೊದಲಕಲ್ಲು ಶೇಷದಾಸರೆಂದು ಪ್ರಸಿದ್ಧರಾದರು. ಗದ್ವಾಲ ಭೂಪಾಲ ಇವರ ಪ್ರಸಿದ್ಧಿಯನ್ನು ಸಹಿಸಲಾರದೆ, ಸಕಾಲದಲ್ಲಿ ಸರ್ಕಾರಕ್ಕೆ ಹಣ ಕಟ್ಟಲಿಲ್ಲವೆಂದು ಇವರ ಮೇಲೆ ದೂರು ಹೊರಿಸಿ ರಾಜಸಭೆಯಲ್ಲಿ ಅವಮಾನಗೊಳಿಸಿದ. ಆ ಘಟನೆಯಿಂದ ಮನನೊಂದ ಶೇಷಪ್ಪ ದರೂರನ್ನು ಬಿಟ್ಟು ಚಿಂತಲರೇವು ಎಂಬಲ್ಲಿ ವ್ಯಾಸರಾಯರಿಂದ ಪ್ರತಿಷ್ಠಿರವಾದ ಮಾರುತಿರಾಯನ ಸೇವೆಯಲ್ಲಿ ತೊಡಗಿ ಹರಿದಾಸರಾಗಿ ಕಾಲ ಕಳೆದರು. ಇವರ ಗದ್ವಾಲಿನಲ್ಲಿ ಒಂದು ಪಾರ್ಥಸಾರಥಿ ದೇವಾಲಯವನ್ನು ಇಟ್ಟಿಸಿದರಲ್ಲದೆ ವಿದ್ವಜ್ಜನರಿಗೆ ಅತಿಥ್ಯವನ್ನೂ ನೀಡುತ್ತಿದ್ದರು. ಇವರ ಆತಿಥ್ಯವನ್ನು ಸುರಪುರದ ಆನಂದದಾಸರೂ ಯಳಮೇಲೀ ಹಯಗ್ರೀವಾಚಾರ್ಯರೂ ಸ್ವೀಕರಿಸಿದರು. ಇವರು ಕೆಲವು ದಿನಗಳನ್ನು ಚೀಕಲಪರವಿಯ ಅಶ್ವತ್ಥ ನರಸಿಂಹದೇವರ ಸೇವೆಯಲ್ಲಿ ಕಳೆದರು. ಅನಂತರ ಚಿಪ್ಪರಿಯಲ್ಲಿ ಕೆಲದಿನವಿದ್ದು ಮತ್ತೆ ಚಿಂತಲರೇವಿಗೆ ಬಂದರು. ಅಲ್ಲಿ ಸ್ವಲ್ಪಕಾಲವಿದ್ದು ಅಂತರ ಮೊದಲಕಲ್ಲಿಗೆ ವಾಪಸಾದರು. ಅಲ್ಲಿ ಸುಮಾರು ಇಪ್ಪತ್ತು ವರ್ಷಗಳಷ್ಟು ದೀರ್ಘಕಾಲ ಭಗವದ್ ಸ್ಮರಣೆಯಲ್ಲಿ ಕಳೆದು, ಗದ್ವಾಲಿನಲ್ಲಿ ಮರಣಹೊಂದಿದರು. ಇವರ ದೇಹಸಂಸ್ಕಾರ ಮಾಡಿದ ಸ್ಥಳದಲ್ಲಿ ಒಂದು ಬೃಂದಾವನವಿದೆ. ವೈಶಾಖ ಶುದ್ಧ ಅಷ್ಟಮಿಯಂದು ಪ್ರತಿವರ್ಷ ದಾಸರ ಪುಣ್ಯತಿಥಿ ನಡೆಯುತ್ತದೆ.

ಗುರುವಿಜಯವಿಠಲ ಎಂಬ ಅಂಕಿತದಿಂದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. 43 ಸುಳಾದಿಗಳು, ಅನೇಕ ದೇವರನಾಮಗಳು, ಉಗಾಭೋಗಗಳು ದೊರೆತಿವೆ. 18 ತಾಳಗಳಿರುವ ಒಂದು ದೊಡ್ಡ ಸುಳಾದಿಯೂ ಇದೆ. ಭಕ್ತಿಯ ಬಗ್ಗೆ ಇವರಿಗೆ ವಿಶೇಷ ಒಲವಿದ್ದದ್ದು ಇವರ ಕೀರ್ತನೆಗಳಿಂದ ತಿಳಿದು ಬರುತ್ತದೆ. ಕೆಲವು ಸುಳಾದಿಗಳಲ್ಲಿ ಭಕ್ತರ ಬಗ್ಗೆಯೂ ಹೇಳಿದ್ದಾರೆ. ಸಮಾಜದ ನಡತೆ ಕುರಿತು ಹೇಳುವಾಗ ಒಳಗೊಂದು ಹೊರಗೊಂದು ನುಡಿವ ಜನರನ್ನು ವಿಡಂಬಿಸಿದ್ದಾರೆ.

ಇವರ ರಚನೆಗಳಲ್ಲಿ ವಡೆಯರಿಲ್ಲದ ವೃಕ್ಷ, ಅನಾದಿ ಕ್ರಮವನ್ನು ಅನುಭವ ಮಾಡುವುದು, ಯನ್ನ ಪಕ್ಷವು, ನೀನೆ, ಆವಾವ ಕಾಲದಲ್ಲಿ ಎಂಬಂಥ ಆಕರ್ಷಕ ವಾಕ್ಯಗಳಿದ್ದರೂ ಒಟ್ಟು ಸಾಹಿತ್ಯ ಮೌಲ್ಯದಿಂದ ಇವರ ಕೊಡುಗೆ ಅಷ್ಟೇನೂ ಗಮನಾರ್ಹವಾಗಿಲ್ಲ.								

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ